ಅಸ್ಸಾಂ	
 	
ಆಸ್ಸಾಂ ಭಾರತದ ಪ್ರಾಂತ್ಯಗಳಲ್ಲೊಂದು. ಈಶಾನ್ಯಕ್ಕಿದೆ. (ಪೂ.ರೇ. 890 45' - 960. ಉ.ಅ. 220-280.) ವಿಸ್ತೀರ್ಣ 47,091 ಚ.ಮೈ. ಜನಸಂಖ್ಯೆ 10,959,744 (1961). ಉತ್ತರದಲ್ಲಿ ಟಿಬೆಟ್, ಪೂರ್ವಕ್ಕೆ ಬರ್ಮ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಪೂರ್ವ ಪಾಕಿಸ್ತಾನ ಮೇರೆಗಳಾಗಿವೆ. ನೇಪಾಳ ಮತ್ತು ಪಾಕಿಸ್ತಾನಗಳ ನಡುವಿರುವ, ಹಿಮಾಲಯ ಪರ್ವತಗಳ ತಪ್ಪಲುಪ್ರದೇಶದ ಮೂಲಕ ಭಾರತದ ಇತರ ಭಾಗದೊಡನೆ ಸೇರಿದೆ. ರಾಜ್ಯದ ರಾಜಧಾನಿಯಾದ ಷಿಲ್ಲಾಂಗ್ ಭಾರತದ ಪರ್ವತಧಾಮಗಳಲ್ಲೊಂದಾಗಿದೆ. (ಎತ್ತರ 4900').

ಪ್ರಸ್ತುತ ಲೇಖನದಲ್ಲಿ ಅಸ್ಸಾಮಿನ ಭೂವಿವರಣೆ, ಜನಸಂಖ್ಯೆ, ಸಸ್ಯ ಮತ್ತು ಪ್ರಾಣಿವರ್ಗ, ವ್ಯವಸಾಯ, ಕೈಗಾರಿಕೆಗಳು, ಪ್ರೇಕ್ಷಣೀಯ ಸ್ಥಳಗಳು _ ಇವನ್ನು ನಿರೂಪಿಸಲಾಗಿದೆ. ಅಸ್ಸಾಮಿನ ಪ್ರಾಕ್ತನ ಚರಿತ್ರೆ, ಇತಿಹಾಸ, ಭಾಷೆ ಮತ್ತು ಸಾಹಿತ್ಯಗಳಿಗೆ ಆಯಾ ಲೇಖನಗಳನ್ನು ನೋಡಿ.

ಪ್ರಾಕೃತಿಕ ವಿಭಾಗಗಳು : ಅಸ್ಸಾಂ ರಾಜ್ಯ ಅನೇಕ ಪರ್ವತಗಳಿಂದಲೂ ಬೆಟ್ಟಗಳಿಂದಲೂ ಕೂಡಿದೆ. ಹಿಮಾಲಯ ಪರ್ವತಗಳ ತಪ್ಪಲುಗಳು ಉತ್ತರದಲ್ಲೂ ಗಾರೋ. ಖಾಸಿ, ಜೈಂತಿಯ, ಮಿಕಿರ್ ಮತ್ತು ನಾಗಾ ಬೆಟ್ಟಗಳು ದಕ್ಷಿಣದಲ್ಲೂ ಮೇರೆಯಾಗಿರುವ ಕಿರಿದಾದ ಉದ್ದವಾದ ಬ್ರಹ್ಮಪುತ್ರಾ ನದೀಕಣಿವೆಯಲ್ಲಿ ಈ ರಾಜ್ಯದ ಬಹುಪಾಲು ಜನ ವಾಸಿಸುತ್ತಾರೆ. ರಾಜ್ಯದ ವಾಯುಗುಣ ತಂಪಾಗಿದ್ದು, ಹೆಚ್ಚು ತೇವಾಂಶದಿಂದ ಕೂಡಿದೆ. ಅಧಿಕವಾಗಿಯೂ ಬಹುಕಾಲದವರೆಗೂ ಇರುವ ನೈರುತ್ಯ ಮಳೆ ಪಡೆಯುವ ಪಶ್ಚಿಮದ ಬೆಟ್ಟವನ್ನುಳಿದು, ಅಸ್ಸಾಂ ರಾಜ್ಯ ಭಾರತದಲ್ಲೇ ಅತ್ಯಧಿಕ ಮಳೆ ಪಡೆಯುವ ಭಾಗ (ಸರಾಸರಿ 2,300 ಮಿ. ಮೀ). ನವಗಾಂಗ್‍ನ ರಾಜ್ಯದ ಉತ್ತರಮೈದಾನದಲ್ಲಿ 1,300ಮಿ.ಮೀ. ಗಳವರೆಗೂ ಚಿರ್ರಾಪುಂಜಿಯಲ್ಲಿ 12,000 ಮಿ.ಮೀ. ಗಳವರೆಗೂ ಮಳೆಯಾಗುತ್ತದೆ. ಸೆಪ್ಟೆಂಬರ್ ಮಧ್ಯದಿಂದ ಮಾರ್ಚ್‍ವರೆಗೆ ವಾಯುಗುಣ ಹಿತಕರವಾಗಿ ತಂಪಾಗಿರುತ್ತದೆ.

ರಾಜ್ಯದಲ್ಲಿ ಅನೇಕ ದೊಡ್ಡ ಮತ್ತು ಚಿಕ್ಕ ಸಾರ್ವಕಾಲಿಕ ನದಿಗಳಿವೆ. ಪ್ರಪಂಚದ ದೊಡ್ಡ ನದಿಗಳಲ್ಲೊಂದಾದ ಬ್ರಹ್ಮಪುತ್ರಾ ನದಿಗೆ ಇಕ್ಕೆಲಗಳಿಂದ ಅನೇಕ ಉಪನದಿಗಳು ಬಂದು ಸೇರುತ್ತವೆ. ಸುಬಾನ್ಸಿರಿ, ಭಾರಾರಿ, ಪಾಗ್ಲಾಡಿಯಾ, ಮಾನಹ್ ಮತ್ತು ಸಂತೋಷ್ ಎಂಬುವು ಉತ್ತರ ದಂಡೆಯಿಂದಲೂ ಬುರ್ಹಿದಿಹಿಂಗ್, ಧಾನ್ರಿಖ, ಕೋಪಿಲಿ, ದೀಗಾರು, ದೂಧ್ನೊಯ್ ಮತ್ತು ಕೃಷ್ಣಾಯಿ ಎಂಬುವು ದಕ್ಷಿಣ ದಂಡೆಯಿಂದಲೂ ಹರಿದುಬರುವ ಕೆಲವು ಮುಖ್ಯ ಉಪನದಿಗಳು. ಇವುಗಳಲ್ಲಿ ಅನೇಕ ನದಿಗಳು ಅನೇಕ ಜಲಪಾತಗಳ ಮತ್ತು ಚಿಕ್ಕ ಜಲಪಾತಸರಣಿಗಳನ್ನುಳ್ಳ, ವರ್ಷವೆಲ್ಲ ಪ್ರವಾಹದಿಂದ ಹರಿಯುವ ನದಿಗಳು. ಆದ್ದರಿಂದ ಅಸ್ಸಾಂ ರಾಜ್ಯ ಅಧಿಕ ಜಲವಿದ್ಯುಚ್ಛಕ್ತಿಯ ಸಂಪತ್ತನ್ನು ಪಡೆದಿದೆ.

ಜನ : ವಿವಿಧ ಬುಡಕಟ್ಟಿಗೆ ಸೇರಿದ ಜನರುಳ್ಳ ಅಸ್ಸಾಂ ಭಾರತದ ಪ್ರತೀಕವಾಗಿದೆ. ಅಸ್ಟ್ರೋ_ ಏಷ್ಯಾಟಿಕ್, ದ್ರಾವಿಡ ಮತ್ತು ಮಂಗೋಲ್ ಬುಡಕಟ್ಟಿಗೆ ಸೇರಿದ ಜನರು ಈ ರಾಜ್ಯದ ಮೂಲನಿವಾಸಿಗಳು. ಕಡಿಮೆ ಸಂಖ್ಯೆಯಲ್ಲಿ ಬಂದ ಆರ್ಯರು, ಸ್ಥಳೀಯ ಜನರೊಂದಿಗೆ ಬೆರೆತು ನೆಲೆಸಿದರು. ಅನಂತರ ಮೊಗಲರ ಕಾಲದಲ್ಲಿ ಸುಮಾರು 18 ಸಲ ದಂಡೆತ್ತಿ ಬಂದ ಮುಸಲ್ಮಾನರಿಂದ, ಈ ಜನತೆಯಲ್ಲಿ ತುರ್ಕಿ, ಇರಾನಿ ಮತ್ತು ಅರಬ್ಬಿ ಬುಡಕಟ್ಟಿನ ಗುಣಲಕ್ಷಣಗಳು ಬೆಳೆದುವು. ಇಸ್ಲಾಂ ಧರ್ಮ ಹರಡಿತು. ಹೀಗೆ ಪ್ರಸ್ತುತ ಅಸ್ಸಾಮಿ ಜನ ಈ ಎಲ್ಲ ಬಗೆಯ ಸಾಮಾಜಿಕ, ಸಾಂಸ್ಕøತಿಕ, ಬುಡಕಟ್ಟುಗಳ ಮಿಶ್ರ ಜನಾಂಗದವರಾಗಿದ್ದಾರೆ. ಇತ್ತೀಚೆಗೆ ಛೋಟಾ ನಾಗಪುರದ ಆದಿವಾಸಿಗಳು ಟೀ ತೋಟಗಳಲ್ಲಿ ಕೆಲಸಗಾರರಾಗಿಯೂ ನೇಪಾಳದ ಪಶುಪಾಲಕರು, ಕೂಲಿಗಾರರಾಗಿಯೂ, ಸೈನಿಕರಾಗಿಯೂ ಬಂದು ಇಲ್ಲಿ ನೆಲೆಸಿರುವರು. ಬ್ರಹ್ಮಪುತ್ರಾ ನದಿಯ ಕಣಿವೆಯಲ್ಲಿರುವ ಜನ ಪ್ರಾಂತ್ಯ ಭಾಷೆಯಾದ ಅಸ್ಸಾಮಿಯನ್ನು ಮಾತನಾಡುವರು. ಕಚಾರ್ ಕಣಿವೆಯಲ್ಲಿ ಬಂಗಾಳಿ ಹೆಚ್ಚಾಗಿದೆ. ಬೆಟ್ಟಪ್ರದೇಶದ ನಾಲ್ಕು ಜಿಲ್ಲೆಯ ಜನ ಟಿಬೆಟ್, ಬರ್ಮೀ ಭಾಷೆಗಳಿಗೆ ಸೇರಿದ ಸ್ಥಳೀಯ ಉಪಭಾಷೆಗಳನ್ನಾಡುತ್ತಾರೆ. ಬಹುಪಾಲು ಜನರು ಹಿಂದಿ, ಮುಂಡರಿ, ನೇಪಾಳಿ ಭಾಷೆಗಳನ್ನು ಬಳಸುವರು.

ಅಸ್ಸಾಂ ರಾಜ್ಯದಲ್ಲಿ, ಜನಸಂಖ್ಯೆಯ ಶೀಘ್ರ ಬೆಳೆವಣಿಗೆ ಆಶ್ಚರ್ಯಕರವಾಗಿದೆ. 1901ರಲ್ಲಿ ಕೇವಲ 3.7 ದಶಲಕ್ಷವಿದ್ದ ಜನಸಂಖ್ಯೆ 1961ರಲ್ಲಿ ಮೂರರಷ್ಟು ಹೆಚ್ಚಾಗಿ 10.9 ದಶಲಕ್ಷವಾಗಿದೆ. ಈ ಜನಸಂಖ್ಯೆ ಎರಡನೇ ಮಹಾಯುದ್ಧದ ಅನಂತರ ಅತಿಯಾಗಿ ಹೆಚ್ಚಿದೆ. ಇದಕ್ಕೆ ಪಾಕಿಸ್ತಾನದಿಂದ ಅಧಿಕ ಸಂಖ್ಯೆಯಲ್ಲಿ ಬಂದ ನಿರಾಶ್ರಿತರೂ ಸ್ವಾತಂತ್ರ್ಯಾನಂತರ ದೇಶದ ಇತರ ಭಾಗಗಳಿಂದ ಹೆಚ್ಚು ಸಂಖ್ಯೆಯಲ್ಲಿ ಬಂದ ವಲಸೆಗಾರರೂ ಕಾರಣವೆಂದು ತಿಳಿಯಲಾಗಿದೆ.
ಈಗ ಅಸ್ಸಾಂ ರಾಜ್ಯದ ಜನಸಂಖ್ಯೆಯಲ್ಲಿ 7.7%ರಷ್ಟು ಜನ ಪಟ್ಟಣಗಳಲ್ಲಿ ವಾಸಿಸುವರು. ಇತರರು ಗ್ರಾಮವಾಸಿಗಳು. ರಾಜ್ಯದ ಜನಸಂಖ್ಯೆಯಲ್ಲಿ 2/3% ರಷ್ಟು ಹಿಂದೂಮತೀಯರೂ 23.29% ರಷ್ಟು ಮುಸಲ್ಮಾನರೂ 6.44% ಕ್ರೈಸ್ತರೂ 0.31% ಬೌದ್ಧರೂ ಇದ್ದಾರೆ. ಉಳಿದವರು ಇತರ ಧರ್ಮೀಯರೋ ವಿಧರ್ಮೀಯರೋ ಆಗಿದ್ದಾರೆ.

ಸಸ್ಯವರ್ಗ ಮತ್ತು ಪ್ರಾಣಿವರ್ಗ: ರಾಜ್ಯದ ಸುಮಾರು 40% ಪ್ರದೇಶ (4-5 ದಶಲಕ್ಷ ಹೆಕ್ಟೇರುಗಳು)ಕಾಡುಗಳಿಂದ ಕೂಡಿದ್ದರೂ ಕೇವಲ 12% ಮಾತ್ರ ಸಂರಕ್ಷಣೆಪಡೆದ ಭಾಗವಾಗಿದೆ. ಉಳಿದ ಪ್ರದೇಶದಲ್ಲಿ, ಅನಿರ್ಬಂಧವಾಗಿ ಕಡಿಯುವುದರಿಂದಲೂ ಹೆಚ್ಚಾಗಿ ದನಕರುಗಳನ್ನು ಮೇಯಿಸುವುದರಿಂದಲೂ ಪರಿವರ್ತನ ರೀತಿಯ ವ್ಯವಸಾಯದಿಂದಲೂ ಅರಣ್ಯಭಾಗಗಳು ಹಾಳಾಗುತ್ತಿವೆ. ಪ್ರಸಿದ್ಧವಾದ ಸಾಲ, ತೇಗಗಳಲ್ಲದೆ, ವಿವಿಧ ಜಾತಿಯ ಶ್ರೇಷ್ಠ ವೃಕ್ಷಗಳು. ಬಿದಿರು, ಹುಲ್ಲು ಮತ್ತು ಬೆಲೆಬಾಳುವ ಸಸ್ಯಗಳು ಕಂಡುಬರುತ್ತವೆ. 

ಏಷ್ಯದಲ್ಲೆಲ್ಲ ಅಸ್ಸಾಂ ರಾಜ್ಯದ ಪ್ರಾಣಿವರ್ಗ ಹೆಚ್ಚು ವೈವಿಧ್ಯಮಯವಾಗಿದೆ. ಆಫ್ರಿಕವನ್ನು ಬಿಟ್ಟರೆ, ಅಸ್ಸಾಂ ರಾಜ್ಯದಲ್ಲಿರುವಷ್ಟು ವಿವಿಧ ರೀತಿಯ ಪ್ರಾಣಿಗಳು, ಪಕ್ಷಿಗಳು, ಹಾವುಗಳು, ಕ್ರಿಮಿಕೀಟಗಳು ಪ್ರಪಂಚದಲ್ಲಿ ಬೇರೆ ಯಾವ ಪ್ರದೇಶದಲ್ಲೂ ಇಲ್ಲ. ಅಸ್ಸಾಂ ರಾಜ್ಯದ ಕಾಜಿóರಂಗ ವನ್ಯಮೃಗದ ಸಂಕರಕ್ಷಣಾಕೇಂದ್ರದ ಏಕಖಡ್ಗಮೃಗ (ರ್ಹೀನೊ) ಪ್ರಪಂಚದಲ್ಲೆ ದೊಡ್ಡವಾದ ಖಡ್ಗಮೃಗದ ಜಾತಿಗೆ ಸೇರಿದ್ದು. ಈ ರಾಜ್ಯದಲ್ಲಿ ಬಂಗಾಳದ ಹುಲಿ, ಚಿರತೆ, ಕಿರುಬ, ಆನೆ, ಕಾಡೆಮ್ಮೆ, ಕಾಡುಕೋಣ, ಚಿಗರಿ, ಕಡವೆ, ಜಿಂಕೆ, ಉದ್ದಕೊಕ್ಕಿನ ಹಕ್ಕಿಗಳು, ಹೆಬ್ಬಾವು, ನಾಗರಹಾವು--ಮುಂತಾದುವು ಹೇರಳವಾಗಿವೆ. 

ವ್ಯವಸಾಯ: ಜನರ ಮುಖ್ಯ ಕಸಬು, ಒಟ್ಟು ಜನಸಂಖ್ಯೆಯ ಸುಮಾರು 72% ವ್ಯವಸಾಯಾವಲಂಬಿಗಳು, ಬತ್ತ, ಸಾಸಿವೆ, ಕಬ್ಬು, ಆಲೂಗಡ್ಡೆ, ಮೆಕ್ಕೆಜೋಳ, ಉರುಟು ಧಾನ್ಯಗಳು, ಕಿತ್ತಲೆ-ಇವು ಮುಖ್ಯ ವ್ಯವಸಾಯೋತ್ಪನ್ನಗಳು; ಟೀ, ಸೆಣಬು, ಹತ್ತಿ, ಹೊಗೆಸೊಪ್ಪು-ಇವು ಮುಖ್ಯ ವಾಣಿಜ್ಯ ಬೆಳೆಗಳು. ಈ ರಾಜ್ಯ ಸುಮಾರು 2 ದಶಲಕ್ಷ ಟನ್ನುಗಳಷ್ಟು ಬತ್ತವನ್ನು ಉತ್ಪಾದಿಸುವುದು. ಭಾರತದ ವಿಭಜನೆಯ ಅನಂತರ ಸೆಣಬಿನ ಉತ್ಪಾದನೆ ತೀವ್ರವಾಗಿ ಹೆಚ್ಚುತ್ತಿದೆ. ಈ ರಾಜ್ಯ ದೇಶದ ⅓ ರಷ್ಟು, ಎಂದರೆ 1.1 ದಶಲಕ್ಷ ಟನ್ನುಗಳಷ್ಟು, ಸೆಣಬನ್ನು ಉತ್ಪಾದಿಸುತ್ತದೆ. ಪರಿವರ್ತನಕ್ರಮದ ಬೇಸಾಯವನ್ನು (ಝಾಮ್) ಸರ್ಕಾರ ನಿಷೇಧಿಸಿದ್ದರೂ ಬೆಟ್ಟಗಳಲ್ಲಿ ಇನ್ನೂ ಅದು ವ್ಯಾಪಕವಾಗಿ ಕಂಡುಬರುವುದು. ಪ್ರತಿವರ್ಷ ನಿಗದಿಮಾಡಿದ ಪರ್ವತಗಳ ಇಳಿಜಾರುಗಳ ಮೇಲಿನ ಕಾಡುಗಳನ್ನು ಕತ್ತರಿಸಿ, ಕುರುಚಲನ್ನು ಸುಟ್ಟು, ವ್ಯವಸಾಯ ಮಾಡುವರು. ಅನಂತರ ಆ ಭಾಗಗಳಲ್ಲಿ ಪುನಃ ಕಾಡು ಬೆಳೆಯುವಂತೆ ಹಾಗೂ ಸಾರವತ್ತಾಗುವಂತೆ ಬೀಳುಬಿಡುವರು. ಆದರೆ ಈ ಕ್ರಮದಿಂದ ಸ್ವಾಭಾವಿಕ ಸಸ್ಯವರ್ಗ ಕ್ಷೀಣಿಸುವುದಲ್ಲದೆ ಭೂಮಿಯ ಸಾರ ನಶಿಸುವುದು. 

ಕೈಗಾರಿಕೆಗಳು: ಆಸ್ಸಾಂ ರಾಜ್ಯ ಕೈಗಾರಿಕೆಗಳಲ್ಲಿ ಹಿಂದುಳಿದಿದೆ. ಅನೇಕ ಸಂಪನ್ಮೂಲಗಳ ಅನುಕೂಲತೆಗಳಿದ್ದರೂ ಕೈಗಾರಿಕೆಗಳು ಅಭಿವೃದ್ಧಿಗೊಂಡಿಲ್ಲ. ಇದಕ್ಕೆ ಮಾರ್ಗ ಸಂಪರ್ಕಗಳ ಕೊರತೆ, ಮಾರಾಟದ ಸೌಲಭ್ಯಗಳಿಲ್ಲದಿರುವುದು ಮತ್ತು ಅಸ್ಸಾಮಿನ ಸರಹದ್ದಿನ ಸನ್ನಿವೇಶ--ಇವು ಕೆಲವು ಕಾರಣಗಳು. ಪ್ಲಾಂಟೇಷನ್‍ಗಳಲ್ಲಿ ಟೀಯನ್ನು ಬೆಳೆಯುವುದು ಮತ್ತು ಅದನ್ನು ಮಾರಾಟಕ್ಕಾಗಿ ಸಿದ್ಧಪಡಿಸುವುದು ಬಹು ದೊಡ್ಡ ಕೈಗಾರಿಕೆ. ಇದು ರಾಜ್ಯದಲ್ಲಿ ಮಹತ್ತರ ಸ್ಥಾನ ಪಡೆದಿದ್ದು ಅಮೂಲ್ಯ ವಿದೇಶೀ ವಿನಿಮಯ ಹಣವನ್ನು ಸಂಪಾದಿಸುವ ಉದ್ಯಮವಾಗಿದೆ. ರಾಜ್ಯದಲ್ಲಿರುವ ಸುಮಾರು 965 ಪ್ಲಾಂಟೇಷನ್‍ಗಳು 170 ದಶಲಕ್ಷ ಕಿ.ಗ್ರಾಂ ಟೀಯನ್ನು ಉತ್ಪಾದಿಸುವುವು. ಪೆಟ್ರೋಲಿಯಂ ಉತ್ಪಾದನೆ, ಶುದ್ಧೀಕರಣ ಕಾರ್ಯಾಗಾರಗಳು ದಿಗ್ಬಾಯ್ ಮತ್ತು ಗೌಹತಿಯಲ್ಲಿವೆ. ಬಿಹಾರ್ ರಾಜ್ಯದಲ್ಲಿರುವ ಇನ್ನೊಂದು ಶುದ್ಧೀಕರಣ ಕಾರ್ಯಾಗಾರ ಬ್ರಹ್ಮಪುತ್ರಾ ನದಿಯ ಮೇಲ್ಕಣಿವೆಯಲ್ಲಿ ಉತ್ಪಾದಿಸಲಾಗುವ ಎಣ್ಣೆಯನ್ನು ಪೈಪುಗಳ ಮೂಲಕ ಪಡೆಯುತ್ತದೆ. ಪರ್ವತಗಳಿಂದ ಕೂಡಿದ ಗಾರೋ, ಬಾಸಿ, ಮತ್ತು ಜೈಂತಿಯಾ ಜಿಲ್ಲೆಗಳಲ್ಲೂ ಸೀಬ್‍ಸಾಗರ ಮತ್ತು ಲಾಖಿಮ್‍ಪುರ ಜಿಲ್ಲೆಗಳಲ್ಲೂ ಕಲ್ಲಿದ್ದಲು ಸಿಕ್ಕುತ್ತದೆ. ಕಲ್ಲಿದ್ದಲಿನ ಒಟ್ಟು ಉತ್ಪಾದನೆ 7,60,000 ಟನ್ನುಗಳು, ಟೀ ಮತ್ತು ಪೆಟ್ರೋಲಿಯಂ ಉದ್ಯಮಗಳಲ್ಲದೆ, ಚಿರ್ರಾಪುಂಜಿಯ ಒಂದು ಸಿಮೆಂಟ್ ಕಾರ್ಖಾನೆ, ದೇರ್‍ಗಾಂನ (ಸೀಬ್ ಸಾಗರ್) ಒಂದು ಸಕ್ಕರೆ ಕಾರ್ಖಾನೆ, ನಾಮರೂಪದ (ಲಾಖಿಂಪುರ) ಒಂದು ಗೊಬ್ಬರ ಕಾರ್ಖಾನೆ ಮತ್ತು ಸಿಲ್‍ಘಾಟ್‍ನ (ನವಗಾಂಗ್) ಒಂದು ಸೆಣಬಿನ ಕಾರ್ಖಾನೆ--ಇವು ಅಸ್ಸಾಮಿನ ಇತರ ಕೈಗಾರಿಕೆಗಳು.
ಅಸ್ಸಾಂ ರಾಜ್ಯದಲ್ಲಿ ಅನೇಕ ಗೃಹಕೈಗಾರಿಕೆಗಳೂ ಇವೆ. ಅವುಗಳಲ್ಲಿ ನೆಯ್ಯುವುದು ಮತ್ತು ರೇಷ್ಮೆ ಹುಳುಗಳನ್ನು ಸಾಕುವುದು ಬಹು ಮುಖ್ಯ ಸಹಾಯಕ ಕೈಗಾರಿಕೆಗಳು. ಹಿಪ್ಪೆನೇರಳೆಯನ್ನು ಉಪಯೋಗಿಸದ ಎಂಡಿ ಮತ್ತು ಮುಗ ರೇಷ್ಮೆಗಳು ಈ ರಾಜ್ಯದ ವಿಶೇಷ ಉತ್ಪನ್ನಗಳು. ಬಂಗಾರದ ಬಣ್ಣದ ಮುಗ ರೇಷ್ಮೆಯನ್ನು ಬಟ್ಟೆಗಳಿಗೆ ಮಾತ್ರವಲ್ಲದೆ, ಕುಸುರಿ ಕೆಲಸದ ಹೊಲಿಗೆಗೂ ಉಪಯೋಗಿಸಲಾಗುತ್ತದೆ. ಆಕರ್ಷಕವಾದ ತೆಳುಹಳದಿಬಣ್ಣದ ಎಂಡಿ ರೇಷ್ಮೆಯನ್ನು ಮೇಲಿನ ಹೊದಿಕೆಗಾಗಿಯೂ ಅಂಗಿ ಮುಂತಾದ ಬಟ್ಟೆಗಳಿಗಾಗಿಯೂ ಉಪಯೋಗಿಸುವರು. ದಂತದ ಕೆಲಸ ಬಿದಿರಿನ ಕೆಲಸ, ಬೆತ್ತದ ಸಾಮಾನುಗಳು, ಕಂಚಿನ ಸಾಮಾನುಗಳ ತಯಾರಿಕೆ--ಇವು ಇತರ ಗೃಹಕೈಗಾರಿಕೆಗಳು.

ಪ್ರೇಕ್ಷಣೀಯ ಸ್ಥಳಗಳು: ಅಜ್ಞಾತಪ್ರದೇಶವಾದರೂ ರಾಜ್ಯದಲ್ಲಿ ಅಲ್ಲಲ್ಲಿ ಕೆಲವು ಪುಣ್ಯಕ್ಷೇತ್ರಗಳೂ ದೇವಸ್ಥಾನಗಳೂ ಸುಂದರದೃಶ್ಯಗಳಿಂದ ಕೂಡಿದ ಸ್ಥಳಗಳೂ ದೇಶವಿದೇಶಗಳಿಂದ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಮಹಾಭಾರತದ ಕಾಲದ ಎರಡು ಪೌರಾಣಿಕ ಪಟ್ಟಣಗಳಾದ, ಪ್ರಾಗ್ಜೋತಿಷಪುರ (ಗೌಹತಿ) ಮತ್ತು ಶೋಣಿತಪುರ (ತೇಜಪುರಗಳಲ್ಲಿ) ಹಿಂದೂಗಳ ಪ್ರಾಚೀನ ದೇವಾಲಯಗಳೂ ಕ್ಷೇತ್ರಗಳೂ ಇವೆ. ಗೌಹತಿಯಲ್ಲಿರುವ ಕಾಮಾಖ್ಯ ದೇವಸ್ಥಾನ, ಉಮಾನಂದ ದೇವಸ್ಥಾನ, ನವಗ್ರಹ ದೇವಸ್ಥಾನ, ವಶಿಷ್ಠಾಶ್ರಮ ಕ್ಷೇತ್ರಗಳೂ ತೇಜಪುರದ ಮಹಾಭೈರವ ದೇವಸ್ಥಾನವೂ ಲೋಹಿತ್ ನದಿಯ ಪರಶುರಾಮ ಕುಂಡವೂ ಭಾರತದ ಎಲ್ಲ ಭಾಗಗಳಿಂದ ಸಾವಿರಾರು ಯಾತ್ರಿಕರನ್ನು ಆಕರ್ಷಿಸುವುವು. ಸಿಬ್‍ಸಾಗರದಲ್ಲಿರುವ ಅಹೋಮ್ ರಾಜ್ಯದ ಐತಿಹಾಸಿಕ ಅವಶೇಷಗಳೂ ದೀಮಾಪುರದಲ್ಲಿರುವ ಕಚಾರಿ ರಾಜ್ಯದ ಪ್ರಾಚೀನ ಅವಶೇಷಗಳೂ ಸ್ವತಂತ್ರ ಅಸ್ಸಾಂ ಪ್ರಾಚೀನ ವೈಭವವನ್ನು ಸೂಚಿಸುವುವು. 

ಕಾಜಿರಂಗ್ ಮತ್ತು ಮಾನಸ್ ವನ್ಯಮೃಗಸಂರಕ್ಷಣಾಪ್ರದೇಶಗಳಲ್ಲಿರುವ ಏಕಖಡ್ಗಮೃಗ ಮೊದಲಾದ ಪ್ರಾಣಿಗಳೂ ದಟ್ಟವಾದ ಅರಣ್ಯಗಳೂ ಪ್ರಪಂಚದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಷಿಲ್ಲಾಂಗ್ ಭಾರತದಲ್ಲಿ ಪರ್ವತಧಾಮಗಳ ರಾಣಿ ಎಂದು ಹೆಸರಾಗಿದೆ. ಇದು ಪ್ರಪಂಚದಲ್ಲೇ ಅತ್ಯಧಿಕ ಮಳೆ ಪಡೆಯುವ ಚಿರ್ರಾಪುಂಜಿಯಿಂದ 30 ಮೈಲಿ ದಕ್ಷಿಣಕ್ಕಿದೆ. ಇವುಗಳಲ್ಲದೆ, ತೋಕ್ಲಾಯ್‍ನಲ್ಲಿರುವ ಪ್ರಾದೇಶಿಕ ಸಂಶೋಧನವೇಧಶಾಲೆ, ಜೋರ್ಹಾತ್‍ನಲ್ಲಿರುವ ಟೀ ಸಂಶೋಧನ ಕೇಂದ್ರ, ಪೆಟ್ರೋಲಿಯಂ ಎಣ್ಣೆಯ ಬಾವಿಗಳು, ಶುದ್ಧೀಕರಣಕಾರ್ಯಾಗಾರಗಳು ಅನೇಕ ಪ್ರವಾಸಿಗರನ್ನು ಆಕರ್ಷಿಸುವ ಇತರ ಸ್ಥಳಗಳು.

ವಿದ್ಯಾಭ್ಯಾಸದಲ್ಲಿ ಅಸ್ಸಾಂ ರಾಜ್ಯ ಭಾರತದ ಇತರ ರಾಜ್ಯಗಳಿಗಿಂತ ಹಿಂದುಳಿದಿಲ್ಲ. ಭಾರತದ ಸರಾಸರಿ ಅಕ್ಷರಸ್ಥರ ಸಂಖ್ಯೆ 24% ಆದರೆ ಅಸ್ಸಾಮಿನದು 27.4% (1961). ಗೌಹತಿ ಮತ್ತು ದಿಬ್ರೂಗರ್ ನಗರಗಳಲ್ಲಿ ಎರಡು ವಿಶ್ವವಿದ್ಯಾನಿಲಯಗಳಿವೆ. ಎರಡು ವೈದ್ಯಶಾಸ್ತ್ರದ ಕಾಲೇಜುಗಳು, ಎರಡು ಇಂಜಿನಿಯರಿಂಗ್ ಕಾಲೇಜುಗಳು, ಒಂದು ಪಶುವೈದ್ಯಶಾಸ್ತ್ರ ಮತ್ತು ವ್ಯವಸಾಯದ ಕಾಲೇಜುಗಳಿವೆ. ಈ ರಾಜ್ಯದಲ್ಲಿ ಸಾರ್ವಜನಿಕ ವಿದ್ಯೆಗಾಗಿ 75 ಕಾಲೇಜುಗಳಿವೆ. 				 
(ಎಚ್.ಪಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ